ಕುಮಾರ ಗಂಧರ್ವ

 1924-1992 ಸೃಜನಶೀಲ ಗಾಯಕರು, ನವರಾಗಗಳ ಸೃಷ್ಟಿಕರ್ತರು, ಸಂಗೀತ ಶಾಸ್ತ್ರ ಪರಿಣತರು, ಉಪನ್ಯಾಸಕಾರರು, ಭಾರತೀಯ ಸಂಗೀತ ಲೋಕ ಕಂಡ ಅಪರೂಪದ ವ್ಯಕ್ತಿ.

 ಜನಿಸಿದ್ದು ಬೆಳಗಾವಿಯಿಂದ ಹನ್ನೆರಡು ಮೈಲಿ ಪೂರ್ವಕ್ಕಿರುವ `ಸೂಳೆಭಾವಿ' ಎಂಬ ಕುಗ್ರಾಮದಲ್ಲಿ, ಏಪ್ರಿಲ್ 8, 1924ರಲಿ.್ಲ ತಾಯಿ ಗುರುಸಿದ್ದವ್ವ. ತಂದೆ ಸಿದ್ರಾಮಯ್ಯ ವೃತ್ತಿಯಿಂದ ಸರಾಫರಾದರೂ, ಪ್ರವೃತ್ತಿಯಿಂದ ಸಂಗೀತಗಾರರು. ಸಂಪ್ರದಾಯಸ್ಥ ಜಂಗಮರು. ಕುಮಾರರ ಮೊದಲಿನ ಹೆಸರು ಶಿವಪುತ್ರಯ್ಯ, ಬಾಲಕ ಶಿವಪುತ್ರಯ್ಯನಲ್ಲಿ ಅದ್ಭುತವಾದ ಪ್ರತಿಭೆ ಹಾಗೂ ಸ್ಮರಣಶಕ್ತಿಯಿತ್ತು. ಅನುಕರಣ ಮಾಡುವ ಕಲೆಯಂತೂ ಬೆರಗಾಗುವಂತಿತ್ತು. ಈ ತ್ರಿವೇಣಿ ಸಂಗಮದ ಫಲವಾಗಿ ಬಾಲಕ ಶಿವಪುತ್ರ ಆಗಿನ ಪ್ರಖ್ಯಾತ ಗಾಯಕರಾಗಿದ್ದ ಉಸ್ತಾದ ಅಬ್ದುಲ್ ಕರೀಂಖಾನ್, ಸವಾಯಿ ಗಂಧರ್ವ, ಉಸ್ತಾದ ಬಡೇಗುಲಾಂ ಅಲಿಖಾನರಂಥ ವಿದ್ವಾಂಸರ ಹಾಡುಗಾರಿಕೆಯನ್ನು ಗ್ರಾಮೋಫೋನ್‍ಗಳಲ್ಲಿ ಕೇಳಿ, ಲವಲೇಶವೂ ವ್ಯತ್ಯಾಸವಿಲ್ಲದಂತೆ ಹಾಡಿ ಕೇಳುಗರನ್ನು ಬೆರಗುಗೊಳಿಸಿದ. ಒಂಭತ್ತು ವರ್ಷದ ಬಾಲಕನ ಸಂಗೀತ ಕಛೇರಿ ಕೇಳಲು ಜನ ಟಿಕೆಟುಕೊಂಡು ಬರುತ್ತಿದ್ದರು. ಎಚ್.ಎಂ.ವಿ. ಕಂಪನಿ ಹೊರ ತಂದ ಗಾನ ಮುದ್ರಿಕೆಯೂ ಜನಪ್ರಿಯವಾಯಿತು. ಬಾಲಕನ ಈ ಪ್ರತಿಭೆಯನ್ನು ಕಂಡು ಗುರುಮಠಕಲ್‍ನ ಶಾಂತವೀರ ಮಹಾಸ್ವಾಮಿಗಳು ಹರಸಿ `ಕುಮಾರಗಂಧರ್ವ' ನೆಂಬ ಸ್ವರ್ಣ ಪದಕ ನೀಡಿದರು. ಆ ಪ್ರಶಸ್ತಿಯೇ ಅವರ ಶಾಶ್ವತ ಹೆಸರಾಯಿತು.

 ಕುಮಾರನಿಗೆ ಹನ್ನೊಂದನೆಯ ವಯಸ್ಸಿನಲ್ಲಿಯೇ ಅಲಹಾಬಾದ್ ಸಂಗೀತ ಸಮ್ಮೇಳನದಲ್ಲಿ ಹಾಡುವಂತೆ ಕರೆಬಂದಿದ್ದು (1935) ಸಾಮಾನ್ಯವಲ್ಲ. ಅಲಹಾಬಾದ್ ಸಂಗೀತ ಸಮ್ಮೇಳನ ನಂತರ ಬನಾರಸ ಸಂಗೀತ ಸಮ್ಮೇಳನ, ಮುಂಬೈನ ಜಿನ್ನಾ ಹಾಲ್‍ನಲ್ಲಿ 1936 ಹಾಡಿದ ಕಾರ್ಯಕ್ರಮಗಳೆಲ್ಲ ಬಾಲ ಪ್ರತಿಭೆಯ ನಾದಯಾತ್ರೆಯ ದಿಗ್ವಿಜಯಗಳು.

 ಮುಂಬೈನ ಜಿನ್ನಾ ಹಾಲ್‍ನಲ್ಲಿಯ ಕಾರ್ಯಕ್ರಮವನ್ನಂತೂ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ತನ್ನ 2-3-1936ರ ಸಂಚಿಕೆಯಲ್ಲಿ ಹಾಡಿ ಹೊಗಳುತ್ತ `ಮುಂಬರುವ ದಿನಗಳಲ್ಲಿ ಈತ, `ಅಸಾಧಾರಣ ಪ್ರತಿಭಾಶಾಲಿ'ಯಾಗುತ್ತಾನೆ. ಎಂದು ಭವಿಷ್ಯ ನುಡಿಯಿತು. ಆ ಭವಿಷ್ಯ ನಿಜವಾಯಿತು. 

 ಕುಮಾರರೆಂಬ ಬಂಗಾರದ ಗಟ್ಟಿಯನ್ನು ಸರ್ವಾಂಗ ಸುಂದರ ಆಭರಣವನ್ನಾಗಿ ಮಾಡಿದ ಕೀರ್ತಿ ಪಂಡಿತ.ಬಿ.ಆರ್. ದೇವಧರರಿಗೆ ಸಲ್ಲುತ್ತದೆ. ಅಖಂಡ 12 ವರ್ಷಗಳ ಕಾಲ ಕುಮಾರರಿಗೆ ಪಾಂಡಿತ್ಯದ ಹಾಲುಣಿಸಿ ಬೆಳೆಸಿದವರು ದೇವಧರರು. ತಾವು ಸ್ಥಾಪಿಸಿದ “ಸ್ಕೂಲ್ ಆಫ್ ಇಂಡಿಯನ್ ಮ್ಯೂಸಿಕ್” ನ ವಿದ್ಯಾರ್ಥಿಗಳಲ್ಲಿ ಒಬ್ಬನೆಂದು ಬಗೆಯದೇ, ವಿಶೇಷ ಅಕ್ಕರತೆಯಿಂದ, ತಮ್ಮ ಮಗನಂತೆ ಸಾಕಿ ಸಲುಹಿ, ಕುಮಾರನನ್ನು ಪ್ರತಿಭಾವಂತ ಗಾಯಕನನ್ನಾಗಿ ರೂಪಿಸಿದ ಮೂರ್ತಿಕಾರ ಅವರು. ಕೇವಲ ಅನುಕರಣೆಯೇ ಗಾಯನವಲ್ಲ, ಅದೊಂದು ಸೃಜನಶೀಲ ಪ್ರಕ್ರಿಯೆ ಎಂದರುಹಿ, ಸಂಗೀತಶಾಸ್ತ್ರದ ಸಾರಸರ್ವಸ್ವವನ್ನು ಪರಿಚಯಿಸಿದರು. ಕುಮಾರನನ್ನು ನಿಜವಾದ `ಗಂಧರ್ವ' ನನ್ನಾಗಿಸಿದವರು ದೇವಧರ ಮಾಸ್ತರರು.

 ಅಲ್ಲಿಂದ ಮುಂದೆ, ಕುಮಾರರಿಗೆ ಹಿಂದಿರುಗಿ ನೋಡುವ ಪ್ರಮೇಯ ಒದಗಲಿಲ್ಲ. ಹಿಂದೂಸ್ಥಾನಿ ಶಾಸ್ತ್ರೀಯ ಹಾಡುಗಾರಿಕೆಗೆ, ಅಂದರೆ ಖಯಾಲ್ ಗಾಯನಕ್ಕೆ ಹೊಸ ಆಯಾಮ ತಂದು ಕೊಟ್ಟಿದ್ದು, ಸಂಗೀತಶಾಸ್ತ್ರದ ಚೌಕಟ್ಟನ್ನು ಮೀರದೆಯೇ ರಾಗದ ಇನ್ನೊಂದು ಮುಖದರ್ಶನ ಮಾಡಿಸಿದ್ದು, ಮತ್ತೆ ಕೆಲವು ಸಲ ಶಾಸ್ತ್ರದ ಚೌಕಟ್ಟನ್ನೂ ಮೀರಿ ವಿಮರ್ಶಕರನ್ನು ಗೊಂದಲದಲ್ಲಿ ಸಿಲುಕಿಸಿದ್ದು ಅವರ ಪ್ರಯೋಗಶೀಲತೆಗೆ, ಸೃಜನಶೀಲತೆಗೆ ಸಾಕ್ಷಿ. ಕುಮಾರರನ್ನು ಹಿಂದುಸ್ತಾನಿ ಸಂಗೀತದ `ಬಂಡಾಯಗಾರ' ನೆಂದು ಕರೆದರು. ವಿಮರ್ಶಕರ ಆಕ್ಷೇಪಣೆಗಳಿಗೆ ಶಾಸ್ತ್ರ ಸಮ್ಮತವಾದ ತಕ್ಕ ಉತ್ತರವನ್ನು ಕೆಚ್ಚೆದೆಯಿಂದ ಹೇಳಿದವರು ಕುಮಾರರು.

 ಮುಂಬೈ ಶಹರದ ಉಪನಗರ ದಾದರ್‍ನಲ್ಲಿ ಬ್ರಾಹ್ಮಣ ಸಹಾಯಕ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಮಾರರು ಭೂಪರಾಗ ಹಾಡುತ್ತಿದ್ದರು. ಶೋತೃಗಳೆಲ್ಲ ರಾಗನಂದದಲ್ಲಿ ಮೈಮರೆತಿದ್ದಾರೆ. ಭೂಪರಾಗದ ಉತ್ತುಂಗವನ್ನು ಕುಮಾರರು ತಲುಪಿದ್ದಾರೆ ಎಂದುಕೊಂಡಾಗ ತೀರ ಅನಿರೀಕ್ಷಿತವಾಗಿ `ಮಧ್ಯಮ' ಸ್ವರದ ಸ್ಪರ್ಶ ಮಾಡಿಬಿಟ್ಟರು. ಶಾಸ್ತ್ರವು ಭೂಪರಾಗದಲ್ಲಿ ಮಧ್ಯಮ ಸ್ವರವು ವಜ್ರ್ಯವೆಂದು ಹೇಳುತ್ತದೆ. ಕುಮಾರರು ಶಾಸ್ತ್ರದ ಈ ಚೌಕಟ್ಟನ್ನು ಮೀರಿದಾಗ ನೆರೆದವರೆಲ್ಲ `ವಾಹ್' ಎಂಬ ದಾದ್ ನೀಡಿದರು. ಆದರೆ ಸಂಗಿತ ವಿಮರ್ಶಕರು ಮಾತ್ರ `ಭೂಪರಾಗದಲ್ಲಿ ಮಧ್ಯಮ ಸ್ವರವೇಕೆ?' ಎಂದು ಯೋಚನಾಮಗ್ನರಾದರು. ಮುಂದೆ ಈ ಪ್ರಯೋಗ ದೊಡ್ಡ ವಿವಾದಕ್ಕೆ ಕಾರಣವಾಯಿತು. ಆಗ, ಕುಮಾರರು ಎದೆಸೆಟಿಸಿ ನಿಂತು ತಮ್ಮ ಪ್ರಯೋಗ ಒಂದು ಆವಿಷ್ಕಾರವೆಂದೂ, ಆ ರಾಗಕ್ಕೆ ತಾವು `ಚೌತಿಭೂಪ' (ಚೌತಿ - ನಾಲ್ಕನೇ ಸ್ವರ - ಮಧ್ಯಮಸ್ವರ)ವೆಂದು ಹೆಸರಿಟ್ಟಿರುವುದಾಗಿಯೂ ಸಾರಿದರು. ಶಾಸ್ತ್ರನಿಷ್ಠರು, ಸಂಪ್ರದಾಯ ಪ್ರಿಯರು ಈ ಉತ್ತರದಿಂದ ತಣ್ಣಗಾದರು. ಕುಮಾರರ ಈ ಬಂಡಾಯ ಪ್ರವೃತ್ತಿ ಹೊಸ ಹೊಸ ಆವಿಷ್ಕಾರಗಳಿಗೆ ಕಾರಣವಾಗಿದೆ.

 ಅವರು ಸೃಜನಶೀಲ ಗಾಯಕರು. ಒಮ್ಮೆ ಹಾಡಿದ್ದನ್ನೇ ಮತ್ತೆಂದೂ ಹಾಡಲಿಲ್ಲ. “ಒಮ್ಮೆ ಹಾಡಿದ್ದನ್ನು ಮತ್ತೊಮ್ಮೆ ಹಾಡುವ ಸ್ಥಿತಿಗೆ ಬರುವ ಮೊದಲೇ ಕುಮಾರ ಹಾಡುವುದನ್ನು ನಿಲ್ಲಿಸಿರುತ್ತಾನೆ” ಎಂದು ಸಾರಿ, ನುಡಿದಂತೆ ನಡೆದರು. ಒಂದೇ ರಾಗವನ್ನು ನೂರು ಸಲ ಹಾಡಿದರೂ ಅದು ಬೇರೆಯದೇ ಆಗಿರುತ್ತಿತ್ತು. ಅವರ ಪ್ರೀತಿಯ ರಾಗ ಮಾಲವತಿ. 1975ರಲ್ಲಿ ಇದರ ಧ್ವನಿ ಸುರಳಿ ಸಿದ್ಧವಾಗಿದೆ. ಇದನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಅದೆಷ್ಟೋ ಸಲ ಮಾಲವತಿಯನ್ನು ಕುಮಾರರು ಹಾಡಿದ್ದರೂ, ಪ್ರತಿಸಲವೂ ಅದು ಬೇರೆಯದೇ ಆಗಿರುತ್ತಿತ್ತು. ಅವರು ಹಾಡುವ ಶೈಲಿ, ಸ್ವರಗಳ ಲಗಾವ್, ತಾನ್‍ಗಳು, ರಾಗಚಿತ್ರಣ ಇವೆಲ್ಲ ಸಮಕಾಲೀನ ಶ್ರೇಷ್ಠರಿಗಿಂತ ತೀರ ಭಿನ್ನವಾಗಿದ್ದವು.

 ಕುಮಾರರಂಥ ಛಲವಾದಿ ದೊರೆಯುವುದು ವಿರಳ. ಶ್ವಾಸಕೋಶದ ತೊಂದರೆಯಿಂದ ಒಮ್ಮೆ ಐದು ವರ್ಷಗಳ ಕಾಲ (ನವೆಂಬರ್ 1947 ರಿಂದ ಮಾರ್ಚ್ 1952) ಹಾಗೂ ಮತ್ತೊಮ್ಮೆ ಒಂದು ವರ್ಷದ ಕಾಲ (ಡಿಸೆಂಬರ್ 1957ರಿಂದ ಜನವರಿ 1959) ವೈದ್ಯರು ಹಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದರು. ಆದರೆ ಕುಮಾರರು ತಮ್ಮ ಛಲಮಾತ್ರದಿಂದ ಆದಮ್ಯವಾದ ಆತ್ಮವಿಶ್ವಾಸದಿಂದ, ಜೀವನ ಕುರಿತಾದ ಅಪಾರವಾದ ಪ್ರೀತಿಯಿಂದ ಅನಾರೋಗ್ಯವನ್ನು ಗೆದ್ದು, ಸಂಗೀತವೇ ತಮ್ಮ ಉಸಿರು ಎಂಬಂತೆ ಹಾಡತೊಡಗಿದರು. ಅಗ್ನಿ ಪಕ್ಷಿಯಂತೆ ಮರುಹುಟ್ಟು ಪಡೆದು ಮೊದಲಿಗಿಂತಲೂ ಸಶಕ್ತವಾಗಿ ಹಾಡಿ ನಲಿದ ಹಾಡುವಕ್ಕಿ ಅವರು. ತಮ್ಮ ಸುದೀರ್ಘ ಅನಾರೋಗ್ಯದ ಕಾಲದಲ್ಲಿ ಸಂಗೀತದಿಂದ ವಿಮುಖರಾಗದೇ ಸಂಗೀತಶಾಸ್ತ್ರದ ಆಳವಾದ ಅಧ್ಯಯನ ನಡೆಸಿದ ನಾದಯೋಗಿ ಕುಮಾರರು.

 ಹಿಂದೂಸ್ತಾನಿ ಸಂಗೀತದ ರಾಗಗಳಿಗೂ, ನಿಸರ್ಗಕ್ಕೂ ಇರುವ ನಿಕಟ ಸಂಬಂಧವನ್ನು ಬಿಂಬಿಸುವ `ಋತು' ಆಧಾರಿತ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮವನ್ನು ಮೊಟ್ಟಮೊದಲ ಬಾರಿಗೆ ಸಂಯೋಜಿಸಿದ ಕೀರ್ತಿ ಕುಮಾರರಿಗೆ ಸಲ್ಲುತ್ತದೆ. ಗೀತವರ್ಷ, ಗೀತಹೇಮಂತ, ಗೀತವಸಂತ ಇತ್ಯಾದಿ ಕಾರ್ಯಕ್ರಮಗಳೆಲ್ಲ ಅವರ ಕಲ್ಪನೆಯಲ್ಲಿ ಅರಳಿದ ಸುಮಗಳೇ, ಹಿಂದೂಸ್ಥಾನಿ ಹಾಡುಗಾರಿಕೆಯ ವಿವಿಧ ಅಂಗಗಳನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಿದ `ಠುಮರಿ-ಟಪ್ಪಾ-ತರಾನಾ' ಅವರ ಪ್ರೌಢ ಚಿಂತನೆಯ ಪ್ರತೀಕ. `ತುಕಾರಾಮ ಏಕದರ್ಶನ', `ತುಲಸೀದಾಸ ಏಕದರ್ಶನ' ಹಾಗೂ ಕಬೀರ ಸೂರದಾಸ, ತುಲಸಿದಾಸ ಸಂತಮೀರಾರ ಹಿಂದಿ ಭಜನೆಗಳನ್ನು ದೋಹಗಳನ್ನು ಬಳಸಿಕೊಂಡು ರೂಪಿಸಿದ ಕಾರ್ಯಕ್ರಮಗಳು ಸಂಗೀತದ ನೆಲೆಗಟ್ಟಿನ ಮೇಲೆ ಆಧ್ಯಾತ್ಮ ಚಿಂತನೆಯನ್ನು ಬಿಂಬಿಸುವ ಪ್ರಯತ್ನಗಳಾಗಿದ್ದವು.

 ಅನಾರೋಗ್ಯದ ಕಾರಣದಿಂದ ಮುಂಬೈಯಿಂದ ದೇವಾಸಕ್ಕೆ ವಲಸೆ ಬಂದು, ಅಲ್ಲಿಯೇ ನೆಲೆ ನಿಂತ ಬಳಿಕ, ಸುತ್ತಲಿನ ಜಾನಪದ ಸಂಗೀತವನ್ನು ಬಹು ಆಸಕ್ತಿಯಿಂದ ಆಲಿಸಿದರು. ಅದನ್ನು ತಮ್ಮದಾಗಿಸಿಕೊಂಡು ಅದಕ್ಕೊಂದು ಶಾಸ್ತ್ರೀಯ ರೂಪ ನೀಡಿದರು. ತತ್ಪರಿಣಾಮವಾಗಿ `ಹಿಂದುಸ್ತಾನಿ ಸಂಗೀತಕ್ಕೆ `ಧುನ್' ಉಗಮರಾಗಗಳ ಸೇರ್ಪಡೆಯ ಲಾಭವಾಯಿತು. ಅಹಿಮೋಹಿನಿ, ಮಾಲವತಿ, ಮಧಸೂರಜಾ ಮೊದಲಾದ ಧುನ್ ಉಗಮ ರಾಗಗಳನ್ನು ಕುಮಾರರು ನಿರ್ಮಿಸಿ, ಹಿಂದುಸ್ತಾನಿ ಸಂಗೀತದ ರಾಗಭಂಡಾರವನ್ನು 
ಶ್ರೀಮಂತಗೊಳಿಸಿದ್ದಾರೆ. `ಮಾಲವಾಕೆ ಲೋಕ್‍ಧುನ್' ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಿದರು. ಚೌತಿಭೂಪ, ಸಹೇಲಿತೋಡಿ, ಗಾಂಧಿಮಲ್ಲಾರ ರಾಗಗಳನ್ನು ಶಾಸ್ತ್ರ ಆಧಾರದಿಂದ ನಿರ್ಮಿಸಿ ಹಾಡಿದ್ದಾರೆ. ದುರ್ಗಾಕೇದಾರ, ನಂದಕೇದಾರ, ಗೌರಿಬಸಂತ, ಸೋಹನಿಭಟಿಯಾರ ಮೊದಲಾದ ಜೋಡುರಾಗಗಳಿಗೂ ಕುಮಾರರೇ ನಿರ್ಮಾತೃ. ಇವೆಲ್ಲ ಹಿಂದುಸ್ಥಾನಿ ಸಂಗೀತದಲ್ಲಿ ಕುಮಾರರ ಅಳಿಸಲಾಗದ ಹೆಜ್ಜೆ ಗುರುತುಗಳು.

 `ಅನೂಪರಾಗವಿಲಾಸ' ಕುಮಾರರು ನೀಡಿದ ಅಪರೂಪದ ಶಾಸ್ತ್ರೀಯ ಗ್ರಂಥ. ಸಂಗೀತದ ಕುರಿತು ಅವರು ನೀಡಿದ ಉಪನ್ಯಾಸಗಳೂ ಅಷ್ಟೇ. ಸಂಗೀತಶಾಸ್ತ್ರವನ್ನು ಮಥಿಸಿ ತಂದ ನವನೀತಗಳವು. 

 ಮಗ ಮುಕುಲ, ಪತ್ನಿ ವಸುಂಧಾರಾ ತಾಯಿ, ಶಿಷ್ಯ ವಿಜಯ ಸರದೇಶಮುಖರು. ಕುಮಾರರ ಹಾಡಿನ ಪರಂಪರೆಯನ್ನು ಮುಂದುವರಿಸಿದ್ದಾರೆ. ನೂರಾರು ಗಾನತಟ್ಟೆಗಳು, ಧ್ವನಿಸುರುಳಿಗಳು, ಹತ್ತಾರು ವೀಡಿಯೋಗಳ ರೂಪದಲ್ಲಿ ಕುಮಾರರು ಈಗಲೂ ನಮ್ಮೊಂದಿಗಿದ್ದಾರೆ. 

 ಕುಮಾರರಿಗೆ ಸಂದ ಪ್ರಶಸ್ತಿಗಳು ಅನೇಕ. ಉಜ್ಜಯಿನಿ ವಿಶ್ವವಿದ್ಯಾನಿಲಯದ ಡಿ ಲಿಟ್ ಪದವಿ (1973) ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಗೌರವ ಡಾಕ್ಟರೇಟ್ (1962), ಮಧ್ಯಪ್ರದೇಶ ಕಲಾ ಪರಿಷತ್ತಿನ ಸನ್ಮಾನ (1973) ಕೇಂದ್ರನಾಟಕ ಅಕಾಡೆಮಿ ಸನ್ಮಾನ (1972) ಪದ್ಮಭೂಷಣ ಪ್ರಶಸ್ತಿ (1977) ಮಧ್ಯ ಪ್ರದೇಶ ಸರಕಾರದ ಶಿಖರ ಸನ್ಮಾನ್ (1983) ಪದ್ಮವಿಭೂಷಣ (1990) ಪ್ರಶಸ್ತಿ ಇವು ಕೆಲವು ಕುಮಾರ ಗಂಧರ್ವರಿಗೆ ಸಂದ ಗೌರವಗಳು. ಪುಣೆಯ ಸವಾಯಿ ಗಂಧರ್ವ ಉತ್ಸವದಲ್ಲಿ ಕುಮಾರರ ಕೊನೆಯ ಸಾರ್ವಜನಿಕ ಬೈಠಕ್ ನಡೆಯಿತು. 1992 ಜನವರಿ 12 ರಂದು ನಾದಲೀನರಾದರು.

           (ಶಿರೀಷ ಜೊಶಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ